ಕೊಡಗು 1

ಕರ್ನಾಟಕದ ನೈಋತ್ಯ ಭಾಗದಲ್ಲಿರುವ ಒಂದು ಜಿಲ್ಲೆ. ಉತ್ತರ ಅಕ್ಷಾಂಶ 110 56' - 120 50' ಮತ್ತು ಪೂರ್ವ ರೇಖಾಂಶ 750 22' - 760 12' ನಡುವೆ ಹಬ್ಬಿದೆ. ಈ ಜಿಲ್ಲೆ ಪೂರ್ವದಲ್ಲಿ ಮೈಸೂರು, ಉತ್ತರದಲ್ಲಿ ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಂದಲೂ ಪಶ್ಚಿಮ ಮತ್ತು ದಕ್ಷಿಣದಲ್ಲಿ ಕೇರಳ ರಾಜ್ಯದಿಂದಲೂ ಸುತ್ತುವರಿದಿದೆ. ಕೊಡಗಿನ ಗರಿಷವಿ ಉದ್ದ ದಕ್ಷಿಣೋತ್ತರವಾಗಿ 96ಕಿಮೀ; ಗರಿಷವಿ ಅಗಲ ಪೂರ್ವಪಶ್ಚಿಮವಾಗಿ 64ಕಿಮೀ ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕುಗಳೂ ಹನ್ನೊಂದು ಹೋಬಳಿಗಳೂ 304 ಗ್ರಾಮಗಳೂ ಇರುವ ಕೊಡಗು ಜಿಲ್ಲೆಯ ಒಟ್ಟು ವಿಸ್ತೀರ್ಣ 4,104ಚ.ಕಿಮೀ. ಜನಸಂಖ್ಯೆ 5,45,322. ಇದರ ಆಡಳಿತ ಕೇಂದ್ರ ಮಡಿಕೇರಿ.        
 
	ಇಲ್ಲಿರುವ ಪಶ್ಚಿಮ ಘಟ್ಟಗಳ ಮುಖ್ಯ ಶ್ರೇಣಿ ಕೊಡಗಿನ ಬೆನ್ನುಮೂಳೆಯಂತಿದೆ. ಇದು ವಾಯವ್ಯದಿಂದ ದಕ್ಷಿಣಕ್ಕೆ, ಸುಬ್ರಹ್ಮಣ್ಯದಿಂದ ಬ್ರಹ್ಮಗಿರಿಯ ಪಶ್ಚಿಮಾಗ್ರದವರೆಗೆ ಹಬ್ಬಿದೆ. ಇದರ ಉದ್ದ 96ಕಿಮೀ ಗಿಂತಲೂ ಹೆಚ್ಚು. ಇದರಿಂದ ಪೂರ್ವದ ಕಡೆಗೆ ಕೈಬೆರಳುಗಳಂತೆ ಸಾಗಿರುವ ಉನ್ನತ ಶ್ರೇಣಿಗಳು ಹಲವಾರು. ಸುಬ್ರಹ್ಮಣ್ಯ ಅಥವಾ ಪುಷ್ಪಗಿರಿಯಲ್ಲಿ ಪರ್ವತ ಹೆಗ್ಗಂಟಿನ ಎತ್ತರ ಸಮುದ್ರಮಟ್ಟಕ್ಕಿಂತ 1908ಮೀ. ಈ ಎಡೆಯಿಂದ ಕವಲೊಡೆಯುವ ಹಲವು ಶ್ರೇಣಿಗಳ ಪೈಕಿ ಅತ್ಯಂತ ಮುಖ್ಯವಾದ್ದು ಕೋಟೆಬೆಟ್ಟ; ಮಡಿಕೇರಿಯಿಂದ 14ಕಿಮೀ ಉತ್ತರದಲ್ಲಿರುವ ಇದರ ಎತ್ತರ 1792ಮೀ. ಮಡಿಕೇರಿಯ ಬಳಿ ಆರಂಭವಾಗಿ ಪಶ್ಚಿಮಕ್ಕೆ ಸಾಗುವುದು ಬೇಂಗುನಾಡು ಶ್ರೇಣಿ. ಇದಕ್ಕೂ ಘಟ್ಟಗಳ ಮುಖ್ಯ ಶ್ರೇಣಿಗೂ ನಡುವೆ ಅತ್ಯಂತ ಕಿರಿದಾದ ಕೋನ ಏರ್ಪಟ್ಟಿದೆ. ಇವೆರಡೂ ಕೂಡುವೆಡೆಯಲ್ಲಿರುವುದೇ ಬ್ರಹ್ಮಗಿರಿ. ಕಾವೇರಿ ನದಿ ಇಲ್ಲಿ ಉಗಮಿಸುತ್ತದೆ. ಇದಕ್ಕೆ ಉತ್ತರಕ್ಕಿರುವುದು ಸಂಪಾಜೆ ಕಣಿವೆ. ಮಂಗಳೂರು ರಸ್ತೆ ಈ ಮೂಲಕ ಸಾಗುತ್ತದೆ. ಬ್ರಹ್ಮಗಿರಿಯೆಡೆಯಿಂದ ಮುಂದಕ್ಕೆ ಪಶ್ಚಿಮ ಘಟ್ಟಗಳ ಮುಖ್ಯಶ್ರೇಣಿ ಸಾಗುವುದು ಆಗ್ನೇಯಾಬಿsಮುಖವಾಗಿ. ತುಂಬೆಮಲೆ, ಇಗ್ಗುತಪ್ಪ ದೇವರ ಶಿಖರ, ತಡಿಯಂಡಮೋಳು ಮತ್ತು ಸೋಮಮಲೆ ಮುಖ್ಯ ಶಿಖರಗಳು. ಈ ಶ್ರೇಣಿಗೆ ದಕ್ಷಿಣದಲ್ಲಿರುವ ಪೆರಿಯಂಬಾಡಿ ಘಾಟಿನ ಮೂಲಕ ಕಣ್ಣಾನೂರಿಗೆ ರಸ್ತೆಯುಂಟು. ಕೊಡಗಿನ ಆಗ್ನೇಯ ತುದಿಯಲ್ಲಿರುವ ಶ್ರೇಣಿ ಮಲೆನಾಡು. ಇದೂ ಬ್ರಹ್ಮಗಿರಿಯ ಹೊರಗವಲೂ ಕೊಡಗಿನ ದಕ್ಷಿಣದ ಎಲ್ಲೆಗಳು, ವೈನಾಡಿನಿಂದ ಕೊಡಗನ್ನು ಪ್ರತ್ಯೇಕಿಸುವ ಶ್ರೇಣಿಗಳು ಇವು. ಇಲ್ಲಿರುವ ಅತ್ಯುನ್ನತ ಶಿಖರ ದವಸಿಬೆಟ್ಟ. ಇದರ ಸುತ್ತಣಪ್ರದೇಶ ಬಹಳ ಚೆಲುವಾಗಿದೆ. ಅದರ ಹೆಸರು ಹುಯಲೆ ಮಲೆ. ಕೊಡಗಿನ ಪಶ್ಚಿಮದ ಎಲ್ಲೆಯ ಬಳಿ ಇರುವ ಶಿಖರಗಳಲ್ಲಿ ಮುಖ್ಯವಾದವು ಹನುಮನಬೆಟ್ಟ ಮತ್ತು ಪೆರೆಮಾಲೆಮಲೆ. ಬ್ರಹ್ಮಗಿರಿಯಿಂದ ಕಿಗ್ಗಟ್ಟನಾಡಿನ ಕಡೆಗೆ ಅನೇಕ ಕವಲುಗಳು ಹಬ್ಬಿವೆ. ಇವು ಕಡಿದುಮಲೆಗಳು. ವಿರಾಜಪೇಟೆಯ ಬಳಿಯ ಅಂಬಟೆ ಬೆಟ್ಟ, ಬೆಟ್ಟಂಗಾಲ, ಕುಂಡದಬೆಟ್ಟ, ಸಿದ್ಧೇಶ್ವರ ಬೆಟ್ಟ ಇವು ಮುಖ್ಯ. ಇನ್ನು ಕೆಲವು ಕವಲುಗಳು ಪೂರ್ವದ ಕಡೆಗೆ ಜಾರಿ, ಏರಿಳಿದು ಸಾಗಿ, ವಿಶಾಲವಾದ ಬತ್ತದ ಬಯಲುಗಳು ಆಲಿಂಗಿಸಿಕೊಂಡಿವೆ. ಬೇಂಗುನಾಡು ಶ್ರೇಣಿ ಮಡಿಕೇರಿಯ ದಕ್ಷಿಣದಲ್ಲಿ ಎರಡು ಕವಲುಗಳಾಗಿ ಮುನ್ನಡೆಯುತ್ತದೆ. ಒಂದು ಕವಲು ನೂರೊಕ್ಕಲು ಬೆಟ್ಟದಲ್ಲಿ ಪರ್ಯವಸಾನಗೊಂಡರೆ ಇನ್ನೊಂದು ಕವಲು ಡೊಂಕುಡೊಂಕಾಗಿ ಕುಶಾಲನಗರದ ಕಡೆಗೆ ಸಾಗುತ್ತದೆ. ಇದರ ಉನ್ನತ ಶಿಖರ ಕಲ್ಲೂರುಬೆಟ್ಟ. ಇಲ್ಲಿ ತೇಗದ ಕಾಡು ವಿಶೇಷ. ಕೋಟೆಬೆಟ್ಟದ ಉತ್ತರಕ್ಕಿರುವುದು ಸಂತೆಹಳ್ಳಿ ಬೆಟ್ಟಗಳು. ಮುಕ್ರಿಬೆಟ್ಟವೇ ಇವುಗಳ ತುದಿ. ಕೊಡಗಿನ ಉತ್ತರದ ಗಡಿಯಿಂದ ಕಾವೇರಿಯ ಕಡೆಗೆ ಒಂದು ಶ್ರೇಣಿ ಹಬ್ಬಿದೆ. ಮಾಲಂಬಿ ಮತ್ತು ಕನಗಲುಬೆಟ್ಟ ಇದರ ಮುಖ್ಯಶಿಖರಗಳು.

 	ದಕ್ಷಿಣದ ಕಾಶ್ಮೀರ ಎಂದು ಕರೆಯುವ ಇಡೀ ಕೊಡಗು ಪ್ರದೇಶ ಪರ್ವತಮಯವಾಗಿದ್ದರೂ ಸ್ಥಳದಿಂದ ಸ್ಥಳಕ್ಕೆ ಇದರ ಲಕ್ಷಣ ವ್ಯತ್ಯಾಸವಾಗುತ್ತದೆ. ಇದು ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಾಗಿದೆ. ಮಡಿಕೇರಿ ಪ್ರಸ್ಥಭೂಮಿಯ ಎತ್ತರ ಕೋಟೆಯ ಬಳಿಯಲ್ಲಿ ಸಮುದ್ರಮಟ್ಟದಿಂದ 1270ಮೀ. ಪೂರ್ವದ ಕುಶಾಲನಗರದ ಬಳಿ 907ಮೀ. ಸರಾಸರಿ 1170ಮೀ. ಎತ್ತರವಿರುವ ಈ ಪ್ರಸ್ಥಭೂಮಿ ಮಡಿಕೇರಿಯ ಉತ್ತರಕ್ಕೆ 42ಕಿಮೀ ದೂರದಲ್ಲಿರುವ ಸೋಮವಾರಪೇಟೆಯ ವರೆಗೂ ಹಬ್ಬಿದೆ. ಸೋಮವಾರಪೇಟೆಯ ಬಳಿ ಪರ್ವತಗಳು ಅಷ್ಟು ಕಡಿದಾಗಿಲ್ಲ.

ಅಲ್ಲಿ ನಡುನಡುವೆ ಹಸುರು ಇಳಿಜಾರುಗಳೂ ದಟ್ಟ ಕಾಡುಗಳೂ ಉಂಟು. ಇವು ಯುರೋಪಿನ ಉದ್ಯಾನ ನೆಲದ ದೃಶ್ಯವನ್ನು ನೆನಪಿಗೆ ತರುತ್ತವೆ ಎಂದು ಹೇಳುವುದುಂಟು. ಮಡಿಕೇರಿಯ ಬಳಿಯ ಬೆಟ್ಟಗಳು ಒತ್ತೊತ್ತು, ಕಡಿದು, ಕಣಿವೆಗಳ ಆಳ ಹೆಚ್ಚು. ಕಾಡು ಬಲು ದಟ್ಟ. ಕುಶಾಲನಗರದ ಬಳಿಗೆ ಸಾಗಿದಂತೆ ಕರ್ನಾಟಕ ಪ್ರಸ್ಥಭೂಮಿಯ ವಿಶಾಲ ಬಯಲುಗಳು ಆರಂಭವಾಗುತ್ತವೆ. ಇಲ್ಲಿ ನಡುನಡುವೆ ಒಂಟಿ ಬೆಟ್ಟಗಳುಂಟು. ವಿರಾಜಪೇಟೆಯ ಕಡೆಯಲ್ಲಿ-ಬೆಪುŒನಾಡು ಮತ್ತು ಕಡೈಟ್ ನಾಡುಗಳಲ್ಲಿ ಅರಣ್ಯ ದಟ್ಟವಾಗಿಲ್ಲ. ವಿಶಾಲ ಗದ್ದೆ ಬಯಲುಗಳ ಹೆಗಲ ಮೇಲೆ ಚೆಲುವಾದ ಹುಲ್ಲಿನ ದಿಬ್ಬಗಳನ್ನು ಕಾಣಬಹುದು. ಕೊಡಗಿನ ಪೂರ್ವ ಎಲ್ಲೆಯ ಬಳಿ ಕಾವೇರಿ ಮತ್ತು ಲಕ್ಷ್ಮಣತೀರ್ಥಗಳ ನಡುವೆ- ಪರ್ಣಪಾತೀ ವೃಕ್ಷಗಳ ವಿಶಾಲ ಕಾಡುಂಟು. ಇದಕ್ಕೆ ಪಶ್ಚಿಮದಲ್ಲಿ ನಿತ್ಯಹಸುರುಕಾಡು ಹಬ್ಬಿದೆ. ಬಿದಿರುಮೆಳೆ ವಿಶೇಷ. ಒಟ್ಟಿನಲ್ಲಿ ಪರ್ವತಶಿಖರಗಳು ಹುಲ್ಲಿನಿಂದಲೂ ಕಣಿವೆಗಳು ಮತ್ತು ಪರ್ವತಸಾನುಪ್ರದೇಶದ ತೆರವಾದ ಸ್ಥಳಗಳು ನಿತ್ಯಹಸುರುಕಾಡುಗಳಿಂದಲೂ ಕೂಡಿವೆ. ಇಡೀ ಕೊಡಗು ಹಸುರುಮಯ. ಇಲ್ಲಿ ನಿಸರ್ಗ ಸಸ್ಯವೇ ಹೇರಳ. ಅಲ್ಲಲ್ಲಿ ಕಾಪಿs ಮತ್ತು ಇತರ ಬೆಳೆಗಳಿಗಾಗಿ ಇದನ್ನು ತೆಗೆಯಲಾಗಿದೆ.

ಧಾರವಾಡ ಶಿಲಾರಚನೆಗೆ ಸೇರಿದ ಗಾರ್ನಿಟಿಫೆರಸ್ ಬಯೊಟೈಟ್, ಸಿಲ್ಲಿಮನೈಟ್ ಮತ್ತು ಗಾರ್ನಿಟಿಫೆರಸ್ ನೈಸ್‍ಗಳೂ ಪದರಶಿಲೆಗಳೂ ಜಿಲ್ಲೆಯಲ್ಲಿ ವಿಶೇಷವಾಗಿ ಹರಡಿವೆ. ಮಧ್ಯೆ ಮಧ್ಯೆ ಡಾಲೆರೈಟ್, ಬೆಣಚು, ಗ್ರಾನೈಟ್ ಮತ್ತು ಚಾರ್ನ್‍ಕೈಟ್ ಶಿಲೆಗಳ ಅಂತರ್‍ಚಾಚುಗಳಿವೆ. ಎತ್ತರದ ಭಾಗಗಳಲ್ಲಿ ಜಂಬಿಟ್ಟಿಗೆಯ ಮಣ್ಣು, ನದಿದಡಗಳಲ್ಲಿ ಮತ್ತು ಕಣಿವೆಗಳಲ್ಲಿ ಮೆಕ್ಕಲು ಮಣ್ಣಿನ ಹರಹು ಇದೆ. ಬಹಳ ಕೆಳದರ್ಜೆಯ ಕಾಗೆಬಂಗಾರದ ನಿಕ್ಷೇಪಗಳು ಕುಶಾಲನಗರ, ಮಡಿಕೇರಿ ಬಳಿಯಲ್ಲೂ ಮತ್ತು ಶ್ರೀಮಂಗಲನಾಡಿನ ಕೆಲವು ಪ್ರದೇಶಗಳಲ್ಲೂ ಇವೆ. ಮಡಿಕೇರಿ ಮತ್ತು ಸಿದ್ಧಾಪುರದ ಬಳಿಯಲ್ಲಿ ಕ್ಯಾನೈಟ್ ದೊರಕುತ್ತದೆ. ಜಿಲ್ಲೆಯ ಖನಿಜಸಂಪತ್ತು ಅಲ್ಪ.

	ಕೊಡಗಿನ ಮುಖ್ಯ ನದಿ ಕಾವೇರಿ. ಬ್ರಹ್ಮಗಿರಿಯಲ್ಲಿ ಇದರ ಉಗಮ. ಇದು ಸಿದ್ಧಾಪುರದವರೆಗೂ ಆಗ್ನೇಯಾಬಿsಮುಖವಾಗಿ ಹರಿದು, ಅಲ್ಲಿಂದ ಈಶಾನ್ಯಕ್ಕೆ ದಿಕ್ಕು ಬದಲಾಯಿಸಿ, ಸ್ವಲ್ಪ ದೂರ ಜಿಲ್ಲೆಯ ಪೂರ್ವ ಗಡಿಯಾಗಿ ಪರಿಣಮಿಸಿ, ಶಿರಂಗಾಲದ ಬಳಿ ಜಿಲ್ಲೆಯನ್ನು ಬಿಡುತ್ತದೆ. ಇದರ ಎರಡು ಮುಖ್ಯ ಉಪನದಿಗಳಾದ ಹೇಮಾವತಿ ಮತ್ತು ಲಕ್ಷ್ಮಣತೀರ್ಥಗಳು ಕ್ರಮವಾಗಿ ಉತ್ತರ ಮತ್ತು ದಕ್ಷಿಣ ಕೊಡಗುಗಳಲ್ಲಿ ಹರಿಯುತ್ತವೆ. ಹೇಮಾವತೀಯೇ ಕೊಡಗಿನ ಉತ್ತರತಮ ಗಡಿರೇಖೆ. ಕೊಡಗಿನಲ್ಲಿ ಕಾವೇರಿಯನ್ನು ಸೇರುವ ಉಪನದಿಗಳು, ಕನ್ನಿಕೆ, ಕಕ್ಕಬೆ, ಕಾಡನೂರು ಹೊಳೆ, ಮುತ್ತಾರುಮುಡಿ, ಚಿಕ್ಕಹೊಳೆ ಮತ್ತು ಹಾರಂಗಿ. ಕಕ್ಕೆಹೊಳೆ, ಚೇರನಹೊಳೆ, ಮಾದಪುರ ಮತ್ತು ಹಟ್ಟೆಹೊಳೆ -ಇವು ಹಾರಂಗಿಯ ಉಪನದಿಗಳು. ಪಶ್ಚಿಮಕ್ಕೆ ಹರಿಯುವ ಒಂದು ಮುಖ್ಯ ನದಿಯೆಂದರೆ ಬರಪೆÇಳೆ. ಇದು ನೈಋತ್ಯದಲ್ಲಿ ಮಲಬಾರಿನ ಕಡೆಗೆ ಸಾಗುತ್ತದೆ. ಸಾರತ್, ಕುಮಾರಧಾರಾ ಮತ್ತು ಪಯಸ್ವಿನಿ ಇತರ ನದಿಗಳು. ಸಾರತ್ 434' ಎತ್ತರದಿಂದ ದುಮುಕುತ್ತದೆ. ಕೊಡಗಿನ ನದಿಗಳು ಮಳೆಗಾಲದಲ್ಲಿ ತುಂಬಿ ಹರಿಯುತ್ತವೆ. ಬೇಸಗೆಯಲ್ಲಿ ಇವನ್ನು ಸುಲಭವಾಗಿ ದಾಟಬಹುದು.

	ಕೊಡಗು ಜಿಲ್ಲೆಯ ವಾಯುಗುಣ ಸಾಮಾನ್ಯವಾಗಿ ಹಿತಕರ. ಪೂರ್ವಕ್ಕಿಂತ ಪಶ್ಚಿಮ ಭಾಗ ಹೆಚ್ಚು ತಂಪಾಗಿರುತ್ತದೆ. ಏಪ್ರಿಲ್-ಮೇಗಳಲ್ಲಿ ಗರಿಷವಿ ಉಷ್ಣತೆ. ಜನವರಿಯಲ್ಲಿ ಕನಿಷವಿ. ಮಳೆಯೂ ಪೂರ್ವಕ್ಕಿಂತ ಪಶ್ಚಿಮದಲ್ಲಿ ಅದಿsಕ. ಭಾಗಮಂಡಲದಲ್ಲಿ ವಾರ್ಷಿಕ ಮಳೆ 6030ಮಿಮೀ. ಜಿಲ್ಲೆಯ ಪೂರ್ವದ ಎಲ್ಲೆಯಲ್ಲಿರುವ ಕುಶಾಲನಗರದಲ್ಲಿ 1120ಮಿಮೀ. ಜಿಲ್ಲೆಯ ಸರಾಸರಿ ಮಳೆ 2725ಮಿಮೀ. ಸರಾಸರಿ ವರ್ಷದಲ್ಲಿ 118 ಮಳೆದಿನಗಳು.

	ಕೊಡಗಿನ ಪ್ರಾಣಿಗಳು ನೆರೆಯ ಪ್ರದೇಶಗಳ ಪ್ರಾಣಿಗಳಿಗಿಂತ ಬಿsನ್ನವಲ್ಲ. ಕೊಡಗಿನಲ್ಲಿ ಅವಕ್ಕೆ ಕಾಡುಗಳ ರಕ್ಷಣೆಯೂ ಯಥೇಚ್ಫವಾಗಿ ಕುಡಿಯುವ ನೀರೂ ಇರುವುದರಿಂದ ಅವು ಇಲ್ಲಿ ಅದಿsಕ ಸಂಖ್ಯೆಯಲ್ಲಿವೆ. ಇಲ್ಲಿಯ ಮಾಂಸಾಹಾರಿ ಮೃಗಗಳು ಮಳೆಗಾಲದಲ್ಲಿ ನೆರೆಯ ಜಿಲ್ಲೆಗಳಿಗೆ ಹೋಗುತ್ತವೆ. ಹೊಳೆಗಳಿರುವಲ್ಲಿ ಅತ್ಯಂತ ಕಡಿದಾದ ಬೆಟ್ಟಗಳು ಇಲ್ಲದಿರುವಲ್ಲಿ ದೊಡ್ಡ ದೊಡ್ಡ ಮೃಗಗಳುಂಟು. ಉತ್ತರ ಪೂರ್ವ ದಕ್ಷಿಣ ಪ್ರದೇಶಗಳಲ್ಲಿ ಅನೇಕ ಬಗೆಯ ಪ್ರಾಣಿಗಳಿವೆ. ಕಪ್ಪು ಬೂದು ಮತ್ತು ಕಂದು ಬಣ್ಣಗಳ ಕೋತಿಗಳು ಹೇರಳ. ನಾಯಿ ಜಾತಿಯ ಪ್ರಾಣಿಗಳಲ್ಲಿ ಕೆನ್ನಾಯಿ ಮುಖ್ಯವಾದ್ದು. ಈ ಪ್ರಾಣಿ ತೋಳವನ್ನು ಹೋಲುತ್ತದೆ, ಬಹು ಭಯಂಕರ. ಹುಲಿ, ಕಿರುಬ, ಹುಲಿಬೆಕ್ಕು, ಕಾಡುಹಂದಿ, ಕರಡಿ, ಕತ್ತೆ ಕಿರುಬ, ಮುಳ್ಳುಹಂದಿ, ಪುನುಗು ಬೆಕ್ಕುಗಳೂ ಮುಂಗುಸಿ, ಆಮೆ, ಜಿಂಕೆ, ಸಾಂಬಾರ್‍ಗಳು, ಆನೆ, ಕಾಡೆಮ್ಮೆಗಳೂ ಇವೆ. ನಾಗರಹಾವು, ಹೆಬ್ಬಾವುಗಳು, ವಿಶೇಷ ನದಿಗಳಲ್ಲಿ ಮೊಸಳೆ ಇರುವುದುಂಟು. ಗಿಡುಗ, ಹದ್ದು, ಮಿಂಚುಳ್ಳಿ, ಮರಕುಟುಕ, ಕೋಗಿಲೆ, ಮೈನಾ ಮುಂತಾದ ಹಕ್ಕಿಗಳಿವೆ.

	ಕೊಡಗು ಜಿಲ್ಲೆಯ ಮೂರನೆಯ ಒಂದು ಭಾಗ ಅರಣ್ಯಾವೃತ. ರಕ್ಷಿತ ಅರಣ್ಯ ಪ್ರದೇಶಗಳೂ ಸೇರಿ 1,25,952ಹೆ. ಅರಣ್ಯವಿದೆ. ತೇಗ, ಬೀಟೆ, ಹೊನ್ನೆ, ಶ್ರೀಗಂಧ ಇವು ಮುಖ್ಯವಾದ ಮರಗಳು. ತೇಗದ ಮರಗಳ ಕಾಡುಗಳನ್ನು ಸರ್ಕಾರದ ಅರಣ್ಯ ಇಲಾಖೆ ಅಬಿsವೃದ್ಧಿಪಡಿಸುತ್ತಿದೆ. ಬೆಂಕಿಕಡ್ಡಿ ಕೈಗಾರಿಕೆಗೆ ಆವಶ್ಯವಾದ ಮೆದುಮರಗಳನ್ನೂ ನೆಟ್ಟು ಬೆಳೆಸಲಾಗುತ್ತಿದೆ. ಕೊಡಗಿನ ಜನರ ಮುಖ್ಯ ಕಸಬು ಕೃಷಿ. ಬತ್ತ, ರಾಗಿ ಮುಖ್ಯ ಬೆಳೆಗಳು. ಕಾಪಿs, ಕೊಡಗಿನ ಮತ್ತೊಂದು ಮುಖ್ಯ ಕೃಷಿ ಉತ್ಪನ್ನ (ಸು.83,150ಹೆ). ಕಿತ್ತಳೆ ಬೆಳೆಯೂ ವಿಶೇಷ. ಏಲಕ್ಕಿ, ಮೆಣಸು ಬೆಳೆಯುತ್ತಾರೆ. ಅಡಕೆ ಇನ್ನೊಂದು ಫಸಲು. ಮಡಿಕೇರಿಯ ಬಳಿ ಚಹ ತೋಟವೂ ಉಂಟು. ಮಾವುಕೂಟ, ಜೋಡುಪಾಲ, ಸಂಪಾಜೆ ಮತ್ತು ಕಡಮಕಲ್ಲುಗಳಲ್ಲಿ ರಬ್ಬರ್ ತೋಟಗಳಿವೆ. ಬೆಟ್ಟದ ಕೆಳಗೆ ಸಂಪಾಜೆ, ಪೆರಾಜೆ ಮತ್ತು ಚೆಂಬುಗಳಲ್ಲಿ ತೆಂಗು ಮತ್ತು ಗೇರು ಬೆಳೆಯುತ್ತಾರೆ.
ಜೇನುಸಾಕಣೆ ಕೊಡಗಿನ ಒಂದು ಮುಖ್ಯ ಉದ್ಯಮ. ಭಾಗಮಂಡಲದಲ್ಲಿ ಮಧುವನ ಎಂಬ ಜೇನುಸಾಕಣೆ ಕೇಂದ್ರವಿದೆ. ಕೊಡಗು ಜೇನು ಉತ್ಪಾದಕರ ಸಂಘ ಈ ಉದ್ಯಮದ ಬೆಳೆವಣಿಗೆಗಾಗಿ ಶ್ರಮಿಸುತ್ತಿದೆ. ಭಾಗಮಂಡಲದ ಕೇಂದ್ರದಲ್ಲಿ ಜೇನುಸಾಕುವ ತರಬೇತು ನೀಡಲಾಗುತ್ತಿದೆ. ಶನಿವಾರಸಂತೆ ಮತ್ತು ಶಿರಂಗಾಲದಲ್ಲಿ ಕೈಮಗ್ಗದ ಬಟ್ಟೆ ತಯಾರಾಗುತ್ತದೆ. ಶನಿವಾರಸಂತೆಯಲ್ಲಿ ನೇಯ್ಗೆಯ ಶಾಲೆಯುಂಟು. ಶಿರಂಗಾಲದಲ್ಲಿ ಕೈಮಗ್ಗ ನೇಕಾರರ ಸಹಕಾರ ಸಂಘ ಸ್ಥಾಪಿತವಾಗಿದೆ. ವಿರಾಜಪೇಟೆ ತಾಲ್ಲೂಕಿನ ಮಲೆನಾಡಿನಲ್ಲಿ ಬೆತ್ತದ ಸಾಮಾನು ಮಾಡುವವರ ಒಂದು ಸಹಕಾರ ಸಂಘವುಂಟು. ಪೆÇನ್ನಂಪೇಟೆಯ ಬಳಿಯ ಮಡಕೆಬೀಡು ಕುಂಭ ಕೈಗಾರಿಕೆಯ ಕೇಂದ್ರ. ಇಲ್ಲಿ ಇದರ ಒಂದು ಶಾಲೆ ಇದೆ. ಮಡಿಕೇರಿಯಲ್ಲಿ ಪ್ಲಾಸ್ಟಿಕ್ ಚೀಲ ತಯಾರಿಸುವ ಕಾರ್ಖಾನೆಯೂ ತುಕ್ಕುಹಿಡಿಯದ ಉಕ್ಕಿನ ಪಾತ್ರೆ ತಯಾರಿಸುವ ಕಾರ್ಖಾನೆಯೂ ಇವೆ. ಕೂಡಿಗೆಯಲ್ಲಿ ಕಾಪಿs ಪರಿಷ್ಕರಣ ಕಾರ್ಖಾನೆಯುಂಟು. ಮಡಿಕೇರಿಯಲ್ಲಿ ಒಂದು ಸರ್ಕಾರಿ ಮುದ್ರಣಾಲಯವೂ ವಾಹನಗಳ ದುರಸ್ತಿ ಕಾರ್ಯಾಗಾರವೂ ಇವೆ. 1954ರಲ್ಲಿ ಸರ್ಕಾರ ಮೂರ್ಕಲ್‍ನಲ್ಲಿ ಒಂದು ಮರ ಕೊಯ್ಯುವ ಕಾರ್ಖಾನೆ ಸ್ಥಾಪಿಸಿತು. ಕೊಡಗಿನ ಮುಖ್ಯಬೆಳೆ ಬತ್ತವಾದ್ದರಿಂದ ಇಲ್ಲಿ ಹಲವು ಅಕ್ಕಿ ಗಿರಣಿಗಳಿವೆ. ಮಡಿಕೇರಿಯಲ್ಲಿ ನಾಲ್ಕು ಸಣ್ಣ ಎಂಜಿನಿಯರಿಂಗ್ ಕಾರ್ಯಾಗಾರಗಳೂ ಸೋಮವಾರಪೇಟೆ ಮತ್ತು ಕೂಡಿಗೆಗಳಲ್ಲಿ ಒಂದೊಂದು ವ್ಯವಸಾಯೋಪಕರಣ ಕಾರ್ಖಾನೆಯೂ ಉಂಟು. ಕಾಪಿs ತೋಟಗಳಿಗೆ ಅವಶ್ಯವಾದ ಉಪಕರಣಗಳು ಇಲ್ಲಿ ತಯಾರಾಗುತ್ತವೆ. ರಾಜ್ಯದ ಇತರ ಜಿಲ್ಲೆಗಳಲ್ಲಿರುವಂತೆ ಕೊಡಗಿನಲ್ಲೂ ಹಲವು ಜಾತಿ ಮತಗಳ ಜನ ಇದ್ದಾರೆ. ಎರವರು, ಕುಡಿಯರು, ಬೆಟ್ಟ ಕುರುಬರು, ಜೇನು ಕುರುಬರು, ಕೊರಗರು, ಪಣಿಯರು -ಇವರು ಗಿರಿಜನರು; ಹರಿಜನರೂ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇಲ್ಲಿನ ಕೊಡವರು ವಿಶಿಷ್ಟ ಜನ. ಕದಂಬ ವಂಶದ ಚಂದ್ರವರ್ಮ ಇವರ ಮೂಲಪುರುಷನೆಂದು ಹೇಳುತ್ತಾರೆ.
ಶತ್ರುಗಳ ಆಕ್ರಮಣದಿಂದಾಗಿ ಸ್ವಂತ ರಾಜ್ಯ ತೊರೆದುಬಂದು ಕೊಡಗಿನಲ್ಲಿ ನೆಲಸಿದ ಕದಂಬ ಸೈನಿಕರು ಇವರ ಮೂಲಪುರುಷರಿರಬಹುದೆಂದು ಹೇಳಲಾಗಿದೆ. ಕೊಡಗಿನ ಜನರ ಸಂಸ್ಕøತಿ  ವಿಶಿಷ್ಟವಾದ್ದು. ಕತ್ತಿ ಕೋವಿಗಳು ಇವರಿಗೆ ಪ್ರಿಯ. ಹುತ್ತರಿಯ ಕುಣಿತ,  ಬೊಳಕಾಟ, ಕೋಲಾಟ ಮೊದಲಾದವು ಕೊಡಗಿನ ಜನಪದ ನೃತ್ಯಗಳು. ಇವು ವೀರರಸ ಪ್ರಧಾನ. ಹುತ್ತರಿ ಹಬ್ಬದ ಸಮಯದಲ್ಲಿ ಕೋಲಾಟ ಮುಖ್ಯವಾದ್ದು. ಪರಿಯಕುಳಿ ಎಂಬುದು ಯುದ್ಧ ನೃತ್ಯ. ಬೊಳುಕಾಟ ಅಖಿಲ ಭಾರತ ಪ್ರಸಿದ್ಧಿ ಪಡೆದಿದೆ. ಕೈಲ್‍ಪೆÇಳದ್, ಕಾವೇರಿ ಸಂಕ್ರಮಣ, ಹುತ್ತರಿ, ಶಿವರಾತ್ರಿ, ಉಗಾದಿ, ಷಷ್ಟಿ, ವಿಷ್ಣು ಸಂಕ್ರಮಣ -ಇವು ಕೊಡವರ ಮುಖ್ಯ ಹಬ್ಬಗಳು. ಕೊಡಗರ ಉಡುಪೂ ವೈಶಿಷ್ಟ್ಯಪೂರ್ಣ. ಗಂಡಸರು ಹಬ್ಬಹರಿದಿನ ವಿವಾಹ ಸಮಯಗಳಲ್ಲಿ ಜರಿಪೇಟ, ಕರಿಯ ಮೇಲಂಗಿ, ಜರಿಯ ನಡುದಟ್ಟಿ ತೊಟ್ಟು ಬಲಗಡೆಗೆ ಬೆಳ್ಳಿಯ ಒರೆಯಲ್ಲಿ ಕತ್ತಿ ಧರಿಸುತ್ತಾರೆ. ಸೆರಗನ್ನು ಹಿಂದಕ್ಕೆ ಬಿಟ್ಟು ವಿಶಿಷ್ಟ ರೀತಿಯಲ್ಲಿ ಸೀರೆ ಉಡುವುದೂ ತುಂಬುತೋಳಿನ ರವಿಕೆ ತೊಡುವುದು ಸ್ತ್ರೀಯರ ಕ್ರಮ. ವಿಶೇಷ ದಿನಗಳಲ್ಲಿ ಇವರು ತಲೆಗೆ ಜರಿಹೊದಿಕೆ ಕಟ್ಟುತ್ತಾರೆ. ಕೊಡವರಿಗೆ ಅವರದೇ ಆದ ಭಾಷೆಯಿದೆ. ಅದು ಕೊಡವ ನುಡಿ. ಅದಕ್ಕೆ ಲಿಪಿಯಿಲ್ಲ. ಅದು ಕನ್ನಡ ತಮಿಳು ಮಲಯಾಳಂ ಶಬ್ದಗಳಿಂದ ಕೂಡಿದೆ. ಕನ್ನಡ ಮೂಲ ಶಬ್ದಗಳೇ ಅದಿsಕ. ಅಪ್ಪನೆರವಂಡ ಅಪ್ಪಚ್ಚಕವಿ, ನಡಿಕೇರಿಯಂಡ  ಚಿಣ್ಣಪ್ಪ ಇವರು ಕೊಡವ ಭಾಷೆಯ ಮುಖ್ಯ ಕೃತಿಕಾರರು. ಕನ್ನಡ ಕೊಡಗಿನ ವ್ಯವಹಾರ ಭಾಷೆ.

 	ಕೊಡಗಿನ ಜಿಲ್ಲಾ ಕೇಂದ್ರವಾದ ಮಡಿಕೇರಿಗೂ ಜಿಲ್ಲೆಯ ಮುಖ್ಯ ಸ್ಥಳಗಳಿಗೂ ಒಳ್ಳೆಯ ರಸ್ತೆಗಳುಂಟು. ಬೆಂಗಳೂರು, ಮೈಸೂರು, ಮಂಗಳೂರು, ಹಾಸನ, ಚಿಕ್ಕಮಗಳೂರು, ಉಡುಪಿ, ತಲಚೇರಿ, ಕಣ್ಣಾನೂರು ಮುಂತಾದ ಕಡೆಗಳಿಗೆ ಬಸ್ ಮಾರ್ಗಗಳಿವೆ. ಕುಶಾಲನಗರದಲ್ಲಿ ಕೊಡಗು ಜಿಲ್ಲೆಯನ್ನು ಪ್ರವೇಶಿಸಿ, ಮಡಿಕೇರಿಯ ಮಾರ್ಗವಾಗಿ ಸಂಪಾಜೆಗೆ ಸಾಗಿ ಮುಂದುವರಿಯುವ ಮೈಸೂರು -ಮಂಗಳೂರು ಹೆದ್ದಾರಿ, ಮಡಿಕೇರಿಯಿಂದ ಸಿದ್ಧಾಪುರ ವಿರಾಜಪೇಟೆಗಳ ಮೂಲಕ ಕಣ್ಣಾನೂರು ತಲಪುವ ಮಡಿಕೇರಿ - ತಲಚೇರಿ ಹೆದ್ದಾರಿ, ಮಡಿಕೇರಿಯಿಂದ ಮಾದಾಪುರ, ಸೋಮವಾರಪೇಟೆ, ಶನಿವಾರ ಸಂತೆಗಳ ಮೂಲಕ ಸಾಗುವ ಮಡಿಕೇರಿ - ಕೊಡ್ಲಿಪೇಟೆ ಹೆದ್ದಾರಿ, ಮಡಿಕೇರಿಯಿಂದ ಮೂರ್ನಾಡು ಮೂಲಕ ವಿರಾಜಪೇಟೆ ತಲಪುವ ದಾರಿ, ಮಡಿಕೇರಿ - ಭಾಗಮಂಡಲ ಮಾರ್ಗ, ವಿರಾಜಪೇಟೆಯಿಂದ ಗೋಣಿಕೊಪ್ಪಲು, ತಿತ್ತಿಮತ್ತಿ ಮತ್ತು ಆನೇಚೌಕೂರು ಮಾರ್ಗ, ವಿರಾಜಪೇಟೆ ಹುಣಸೂರು ಹೆದ್ದಾರಿ, ಗೋಣಿಕೊಪ್ಪಲಿನಿಂದ ಪೆÇನ್ನಂಪೇಟೆ ಹುದಕೇರಿ ಕುಟ್ಟಗಳ ಮೂಲಕ ಸಾಗುವ ಗೋಣಿಕೊಪ್ಪಲು ಮಾನಂದವಾಡಿ ಹೆದ್ದಾರಿ, ನಾಪೆÇಕ್ಲು ಕಕ್ಕೆಬೆ ಕಡಂಗ ಕದನೂರು ವಿರಾಜಪೇಟೆ ಹೆದ್ದಾರಿ, ಕುಶಾಲನಗರದಿಂದ ಕೂಡಿಗೆಯ ಮೂಲಕ ಮಡಕೇರಿ ಕೊಡ್ಲಿಪೇಟೆ ಹೆದ್ದಾರಿಯನ್ನು ಸೇರುವ ದಾರಿ, ಕೂಡಿಗೆ-ಶಿರಂಗಾಲ ಮಾರ್ಗ - ಇವು ಜಿಲ್ಲೆಯ ಮುಖ್ಯ ರಸ್ತೆಗಳು ಕೊಡಗಿನಲ್ಲಿ ರೈಲುಮಾರ್ಗವಿಲ್ಲ.

	ಜಿಲ್ಲೆಯ ಕೇಂದ್ರ ಮಡಿಕೇರಿ, ಇದು ಪ್ರವಾಸಿ ಕೇಂದ್ರ ಕೂಡ. ತಲಕಾವೇರಿ, ಭಾಗಮಂಡಲ, ರಾಮಸ್ವಾಮಿ ಕಣಿವೆ, ಕೂಡಿಗೆ, ನಾಲ್ಕುನಾಡು ಅರಮನೆ, ಇಗ್ಗುತಪ್ಪದೇವರ ಶಿಖರ, ಚೆಟ್ಟಳ್ಳಿ ಇವು ಇತರ ಪ್ರೇಕ್ಷಣಿಯ ಸ್ಥಳಗಳು.

	ವಿರಾಜಪೇಟೆ, ಪೆÇನ್ನಂಪೇಟೆ, ಗೋಣಿಕೊಪ್ಪಲು, ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ, ಕುಶಾಲನಗರ, ಶುಂಟಿಕೋಪ್ಪ -ಇವು ಇತರ ಮುಖ್ಯ ಊರುಗಳು. ಅಮ್ಮತ್ತಿ, ಸಿದ್ಧಾಪುರ, ಪೆÇಲ್ಲಿಬೆಟ್ಟ, ತಿತ್ತಿಮತ್ತಿ, ಬಾಳೆಲೆ -ಇವು ಕಾಪಿs ವ್ಯವಸಾಯ ಕೇಂದ್ರಗಳು. ಪೆÇಲ್ಲಿಬೆಟ್ಟ, ತಿತ್ತಿಮತ್ತಿ, ಬಾಳೆಲೆ -ಇವು ಕಿತ್ತಳೆ ತೋಟಗಳಿಗೂ ಪ್ರಸಿದ್ಧವಾಗಿವೆ.    (ಎಂ.ಆರ್.ಆರ್.)

ಕರ್ನಾಟಕ ಭಾಗದ ಸಹ್ಯಾದ್ರಿಯ ದಕ್ಷಿಣ ತುದಿಯಲ್ಲಿರುವ ಈ ಜಿಲ್ಲೆ ಐತಿಹಾಸಿಕವಾಗಿ ಸಾಂಸ್ಕøತಿಕವಾಗಿ ವೈಶಿಷ್ಟ್ಯವನ್ನು ಉಳಿಸಿಕೊಂಡಿದೆ. ಈ ಜಿಲ್ಲೆಯ ವಿಶೇಷ ಹೆಸರಾದ ಕೊಡಗು ಪದದ ಮೂಲ ಅಸ್ಪಷ್ಟ. ಕನ್ನಡದ ಕುಡು (ಮಲೆಯ ಪ್ರದೇಶ) ಕೊಡಗು ಆಗಿದೆ; ಹಲವಾರು ಮಲೆಗಳ ಇಳಿಜಾರುಗಳಿರುವುದರಿಂದ ಮೂಲತಃ ಕೊಡಿಮಲೆನಾಡು ಎಂದಿದ್ದ ಇದು ಕೊಡಗಾಗಿ ರೂಪಾಂತರವಾಗಿದೆ; ಕೊಡಗು ಎಂದರೆ ಪಶ್ಚಿಮಕ್ಕಿರುವ ನಾಡು, ಈ ಜಿಲ್ಲೆ ಪಶ್ಚಿಮಕ್ಕಿರುವುದರಿಂದ ಈ ಹೆಸರು ಬಂತು ಎಂದು ಊಹೆಗಳಿವೆ. ಕೊಡಗಿನಲ್ಲಿ ಪ್ರಸಿದ್ಧವಾಗಿರುವ ಕಾವೇರಿ ಮಾಹಾತ್ಮ್ಯವೆಂಬ ಪೌರಾಣಿಕ ಗ್ರಂಥದ ಪ್ರಕಾರ ಇದಕ್ಕೆ ಬ್ರಹ್ಮಕ್ಷೇತ್ರ, ಮತ್ಸ್ಯದೇಶ ಮತ್ತು ಕ್ರೋಡದೇಶ ಎಂಬ ಹೆಸರುಗಳೂ ಇವೆ. ಈ ಹೆಸರುಗಳ ಮೂಲದ ಬಗ್ಗೆ ಹಲವು ಪೌರಾಣಿಕ ಕಥೆಗಳಿವೆ. ಕೊಡಗಿನ ಇತಿಹಾಸ ಕ್ರಿ.ಶ.2ನೆಯ ಶತಮಾನದಿಂದ ಪ್ರಾರಂಭವಾಗುತ್ತದೆ. ತಮಿಳು ಸಂಘಂ ಸಾಹಿತ್ಯದಲ್ಲಿ ಕುಡಗು ನಾಡಿನ ಉಲ್ಲೇಖವಿದ್ದು, ಇದು ಪಾಂಡ್ಯರಾಜ್ಯದೊಳಗಿದ್ದಂತೆ ಹೇಳಿಕೆಗಳಿವೆ. 4ನೆಯ ಶತಮಾನದಾರಭ್ಯ ಗಂಗ, ಕದಂಬ, ಚೋಳರ ವಶದಲ್ಲಿತ್ತು. 11-12ನೆಯ ಶತಮಾನದಲ್ಲಿ ಕೊಂಗಾಳ್ವರು, ಚಂಗಾಳ್ವರು ಇಲ್ಲಿ ಆಳುತ್ತಿದ್ದರು. ಅನಂತರ ಇದು ಹೊಯ್ಸಳ, ವಿಜಯನಗರ ರಾಜ್ಯಗಳ ಆಳಿಕೆಗೊಳಪಟ್ಟಿತ್ತು. ಪುನಃ ಸ್ವಲ್ಪಕಾಲ ಚಂಗಾಳ್ವರ ಕೈಸೇರಿತು. ಸ್ವಲ್ಪ ಕಾಲ ಹಲವು ಪಾಳೆಯಗಾರರ ವಶದಲ್ಲಿತ್ತು. ಅನಂತರ ಹಾಲೇರಿ ವಂಶದವರು ರಾಜ್ಯವಾಳಿದರು. 1780-89ರವರೆಗೆ ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನ್ ಆಕ್ರಮಿಸಿದ್ದರು. 1834ರಲ್ಲಿ ಬ್ರಿಟಿಷರ ಆಳಿಕೆಗೊಳಪಟ್ಟು ಪ್ರತ್ಯೇಕ ಸಂಸ್ಥಾನದ ಸ್ಥಾನವನ್ನು ಹೊಂದಿತ್ತು. ಆ ಕಾಲದಲ್ಲಿ ಬೆಂಗಳೂರಿನಲ್ಲಿರುತ್ತಿದ್ದ ಮೈಸೂರು ಚೀಫ್ ಕಮಿಷನರ್ ಆಡಳಿತ ನಡೆಸುತ್ತಿದ್ದ. ಇವನ ಅದಿsೀನದಲ್ಲಿ ಕೊಡಗಿನಲ್ಲಿ ಒಬ್ಬ ಸೂಪರಿಂಟೆಂಡೆಂಟ್ ಇರುತ್ತಿದ್ದ. ಕ್ಯಾಪ್ಟನ್ ಲೇಹಾರ್ಡಿ ಕೊಡಗಿನ ಮೊದಲ ಸೂಪರಿಟೆಂಡೆಂಟ್. ಆ ವರೆಗೂ ಕೊಡಗು ರಾಜ್ಯಕ್ಕೆ ಸೇರಿದ್ದ ಪುತ್ತೂರು ಮತ್ತು ಸುಳ್ಯಗಳನ್ನು ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾಯಿಸಿದ್ದರಿಂದ ಕೊಡಗು ರಾಜ್ಯದ ವಿಸ್ತಾರ ಕಡಿಮೆಯಾಯಿತು. ಕೊಡಗು ಇದೇ ಸ್ಥಿತಿಯಲ್ಲೇ ಮುಂದುವರಿದು 1947ರಲ್ಲಿ ಭಾರತ ಸ್ವತಂತ್ರವಾದಾಗ ಕೇಂದ್ರ ಸರ್ಕಾರದ ಗೃಹಖಾತೆಯ ನೇರ ಆಡಳಿತಕ್ಕೆ ಒಳಪಟ್ಟಿತು. 1951ರಲ್ಲಿ ಕೊಡಗು 'ಸಿ ರಾಜ್ಯವೆಂದು ಘೂೀಷಿತವಾಗಿ ಇಲ್ಲಿ 24 ಸದಸ್ಯರ ಲೆಜಿಸ್ಲೆಟೀವ್ ಅಸೆಂಬ್ಲಿ ಸ್ಥಾಪಿತವಾಯಿತು. 1956ರಲ್ಲಿ ರಾಜ್ಯ ಮರುವಿಂಗಡಣೆಯಾದಾಗ ಕೊಡಗು ಮೈಸೂರು ರಾಜ್ಯದ ಭಾಗವಾಗಿ ಸೇರಿತು. 

	ಈ ಜಿಲ್ಲೆಯಲ್ಲಿ ವಿರಾಜಪೇಟೆ, ಸುಚಮಕೇರಿ, ಅಂದಗೋವೆ, ದೊಡ್ಡಬಿಲ್ಹ, ಕಿರೇಬಿಲ್ಹ, ಕೊಡಗರಹಳ್ಳಿ, ಹೆಗ್ಗಡೆಹಳ್ಳಿ ಇವುಗಳ ಬಳಿ ಬೃಹತ್ ಶಿಲಾಸಮಾದಿs ಯುಗದ ಕಲ್ಲುಗುಡ್ಡೆ ಸಮಾದಿsಗಳಿವೆ. ಹಿಂದೆ ಉತ್ಖನನ ನಡೆದಿರುವ ಕೆಲವು ಈ ರೀತಿಯ ಸಮಾದಿsಗಳಲ್ಲಿ ಕಲ್ಲುತೊಟ್ಟಿಯ ರೀತಿಯವೂ ತುದಿ ಚೂಪಿನ ಮಡಕೆಯ ರೀತಿಯವೂ ಕಂಡುಬಂದಿವೆ. ಇವುಗಳಲ್ಲಿ ವಿಚಿತ್ರ ರೀತಿಯ ಮಡಕೆ ಕುಡಿಕೆಗಳು, ಎಲುಬುಗಳು, ಕಬ್ಬಿಣದ ಆಯುಧಗಳು, ಕಲ್ಲಿನ ಮಣಿಗಳು, ಆಟದ ಬೊಂಬೆಗಳು, ರಾಗಿ ಕಾಳು ಇತ್ಯಾದಿ ವಸ್ತುಗಳು ಸೇರಿವೆ.

	ಪ್ರಾಚೀನ ವಾಸ್ತುಶಿಲ್ಪದೃಷ್ಟಿಯಿಂದ ಬಹು ಮಹತ್ವದ ಕೃತಿಗಳು ಕೊಡಗಿನಲ್ಲಿ ಇಲ್ಲವೆಂದೇ ಹೇಳಬಹುದು. ಶನಿವಾರಸಂತೆಯ ಬಳಿಯ ಮುಳ್ಳೂರು (ನೋಡಿ- ಮುಳ್ಳೂರು) ಹಿಂದೆ ಜೈನ ಕೇಂದ್ರವಾಗಿದ್ದು ಇಲ್ಲಿ ಕೊಂಗಾಳ್ವರ ಕಾಲದ ಕೆಲವು ಬಸದಿಗಳ ಅವಶೇಷಗಳಿವೆ; ಈಗ ಬಸದಿಗಳು ಜೀಣೋದ್ಧಾರಗೊಂಡಿವೆ.ಶುಂಟಿಕೊಪ್ಪ ಬಳಿಯ ಬೆಟಗೇರಿಯಲ್ಲಿ ವಿಜಯನಗರ ಕಾಲದ ಒಂದು ಜೈನ ಬಸದಿ ಇದೆ. ಇದು ಕಗ್ಗಲ್ಲಿನ ಸಾಮಾನ್ಯ ರಚನೆ. ಹೊರಮಲೆ ಹಾಲೇರಿ ರಾಜರ ಒಂದು ಶಾಖೆಯ ಕೇಂದ್ರವಾಗಿತ್ತು. ಇಲ್ಲಿ ಅರಮನೆಯ ಅವಶೇಷಗಳು ಮತ್ತು ಒಂದು ಭದ್ರಕಾಳಿ ದೇವಾಲಯ ಇದೆ. ಕೊಡಗಿನ ಪ್ರಸಿದ್ಧವಾದ ವಾಸ್ತು ಕೃತಿಗಳೆಂದರೆ 18-19ನೆಯ ಶತಮಾನಕ್ಕೆ ಸೇರಿದ ಮಡಿಕೇರಿಯಲ್ಲಿರುವ ಕೋಟೆ, ಓಂಕಾರೇಶ್ವರ ದೇವಾಲಯ, ರಾಜರ ಸಮಾದಿsಗಳು ಮತ್ತು ಇಗರ್ಜಿ (ನೋಡಿ- ಮಡಿಕೇರಿ), ಕೊಡಗಿನ ಇಗ್ಗುತಪ್ಪ ದೇವರ ಶಿಖರ, ಇರ್ಪು, ಭಾಗಮಂಡಲ (ನೋಡಿ- ಭಾಗಮಂಡಲ) ಮೊದಲಾದೆಡೆಯದೇವಾಲಯಗಳು ವಾಸ್ತುಶಿಲ್ಪದೃಷ್ಟಿಯಿಂದಲ್ಲದಿದ್ದರೂ ಪವಿತ್ರ ಸ್ಥಾನಗಳಾಗಿ ಪ್ರಸಿದ್ಧವಾಗಿವೆ.	
			  *
	1973ರಲ್ಲಿ ಪ್ರಕಟವಾಗಿರುವ ಎಪಿಗ್ರಾಪಿsಯ ಕರ್ನಾಟಿಕ ನವಮಾಲಿಕೆಯ ಮೊದಲ ಸಂಪುಟದಲ್ಲಿ ನೂರಕ್ಕೂ ಹೆಚ್ಚು ಕೊಡಗಿನ ಶಾಸನಗಳು ಪ್ರಕಟವಾಗಿವೆ. ಹೆಚ್ಚಿನವು ಶಿಲಾಶಾಸನಗಳು. ಕೆಲವು ತಾಮ್ರ ಶಾಸನಗಳು, ಪಾತ್ರೆಗಳ ಹಾಗೂ ಲೋಹದ ಮುದ್ರೆಗಳ ಮೇಲಣ ಬರೆಹಗಳೂ ಇವೆ. ಈ ಶಾಸನಗಳು ಗಂಗ, ಕೊಂಗಾಳ್ವ, ಚಂಗಾಳ್ವ, ವಿಜಯನಗರ, ಬೇಲೂರು ನಾಯಕರು, ಕೊಡಗಿನ ಒಡೆಯರು ಮತ್ತು ಬ್ರಿಟಿಷರ ಕಾಲಕ್ಕೆ ಸೇರಿದವು. ಹೆಚ್ಚಿನ ಶಾಸನಗಳು ಕನ್ನಡದಲ್ಲಿವೆ. ಸಂಸ್ಕøತ, ಪಾರಸೀ, ಇಂಗ್ಲಿಷ್ ಹಾಗೂ ಗ್ರಂಥಲಿಪಿಯವೂ ಇವೆ.	   (ಎಸ್.ಕೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ